Tuesday, July 16, 2013

"ಅಮ್ಮಾ ನೀ ಹಾಡು, ಅದ್ರೆ ನನ್ ಬಿಟ್ಟ್ ಹೊಗ್ಬೇಡ" ಎಂದು ಹೇಳ್ತಿದ್ದವಳು, ವೇದಿಕೆ ಏರುವ ಹೊತ್ತಿಗಾಗ್ಲೆ, " ಅಮ್ಮಾ ನೀ ಹಾಡ್ಬೇಡ ಪ್ಲೀ...ಸ್" ಎಂದು ಬಾಡಿದ ಮುಖದೊಂದಿಗೆ ಸೆರಗ ಹಿಡಿದು ಕೂತಳು.ಅಮ್ಮನ ನೆರಳಾಗೇ ಸದಾ ಹಿಂಬಾಲಿಸೊ ಅವಳು, ಅಂದು ಏನು ಹೇಳಿದ್ರೂ ಕೇಳಲೊಲ್ಲಳು.
ಅದ್ ಹೇಗೋ ಅವಳ ಮನವೊಲಿಸಿ ವೇದಿಕೆ ಏರಿದ್ದೂ ಆಯ್ತು, ಒಂದೆರಡು ಹಾಡಿಗೆ ದನಿಯಾದದ್ದೂ ಆಯ್ತು. ಅವಳೆಡೆಗೆ ನೋಡಿದರೆ ಏನಾಗುತ್ತದೆಂಬ ಅರಿವಿದ್ದರೂ ನೋಡದಿರಲಾಗಲಿಲ್ಲ.ನನ್ನನ್ನೇ ದಿಟ್ಟಿಸುತ್ತಿದ್ದ ಆ ಎರಡು ಕೆಂಗಣ್ಣುಗಳು, ಕಂಬನಿಯನ್ನು ಇನ್ನು ತುಂಬಿಟ್ಟುಕೊಳ್ಳಲಾಗದೆ, ಆಗ ತಾನೇ ನಾ ಮುತ್ತಿಟ್ಟು ಬಂದ ಕೆನ್ನೆಗಳ ಮೇಲೆ ಮುತ್ತಾಗಿ ಹರಿಯತೊಡಗಿದವು. ಆ ಪುಟ್ಟ ತುಟಿಗಳೇನೂ ನುಡಿಯಲಿಲ್ಲ, ಆದರೆ ಆ ಕಂಗಳು ಮತ್ತೊಮ್ಮೆ "ಪ್ಲೀ....ಸ್" ಎಂದವಾ?
"ಬಾ ಇಲ್ಲಿ ಸಂಭವಿಸು" ಎಂದು ವಿನಯ್ ಹಾಡಲು ಶುರುವಿಡುತ್ತಿದ್ದಂತೆಯೇ, ಕೆಳಗಿಳಿದು ಶಾರ್ವರಿಯ ಬಳಿಗೋಡಿದೆ.ಸಹಾಯಕಿಯ ಕೈ ಬಿಡಿಸಿಕೊಂಡು, ಓಡಿ ಬಂದು ಬಿಗಿದಪ್ಪಿದಳು ಕಂದಮ್ಮ.
ಮನೆಯಲ್ಲಿದ್ದಿದ್ದರೆ ಇದು ಅವಳು ಉಂಡು ಮಲಗುವ ಸಮಯ.ನನ್ನೊಡನೆ ಇಲ್ಲಿ, ಅದೂ ಒಲ್ಲದ ಮನಸ್ಸಿನಿಂದ ಅಳುತ್ತಿರಬೇಕೆ ನನ್ನ ಕಂದ ಎಂದೆನಿಸಿದ್ದ್ರೂ, ಬೇರೇನೂ ಉಪಾಯ ತೋಚದೆ ಅವಳನ್ನೂ ವೇದಿಕೆಯೇರಿಸಿ ನನ್ನ ಬಳಿಯೇ ಕುಳ್ಳಿರಿಸಿಕೊಂಡೆ.
ಎಲ್ಲೋ ಒಂದಿಶ್ಟು ಪಾಪಪ್ರಗ್ನೆ, ಮನಸ್ಸಿಗೆ ಸಲ್ಪ ಹಿಂಸೆ ಎನಿಸಿದಾಕ್ಷಣ ನೆನಪಾದೋಳು ನನ್ ಅಮ್ಮಾ.. ತಾಯಿಯಾಗಿ,ಗುರುವಾಗಿ, ಸ್ನೇಹಿತೆಯಾಗಿ ಜೊತೆಗಿದ್ದವಳು, ಇಂದು ಅಜ್ಜಿಯಾಗಿ ಇರದೆ ಹೋದೆಯಲ್ಲಾ ಎಂದು ಮನದಲ್ಲೇ ಅಮ್ಮನಿಗೆ ತುಸು ಗದರಿದೆ.
ಪಾದರಸದಂತೆ ಕೂತಕಡೆ ಕೂರದೆ ಸದಾ ಜಿಗಿಯುತ್ತಿದ್ದ ಶಾರ್ವರಿ ಅಂದು ಸತತ ೧.೩೦ಘಂಟೆಗಳ ಕಾಲ ನನ್ನ ಪಕ್ಕದಲ್ಲೇ ಕೂತು ಇಡೀ ಕಾರ್ಯಕ್ರಮವನ್ನು ಆಲಿಸಿದಳು, ಕೂತಲ್ಲೇ ಕುಣಿದಳು. ಮನೆಗೆ ಬಂದ ನಂತರ ನಾನೆಲ್ಲಿ ಸರಿಯಾಗಿ ಹಾಡಲಿಲ್ಲವೆಂಬ ಕಾಮೆಂಟ್ರಿಯನ್ನು ಕೂಡ ಕೊಟ್ಟಳು. 
ಇಂದು ಶಿಕ್ಷೆ ಎನಿಸಿದರೂ, ಮುಂದೆಂದಾದರು ಶಾರ್ವರಿ ಆ ದಿನವನ್ನು ತನ್ನ ಸಿಹಿಕ್ಷಣಗಳ ಪಟ್ಟಿಯಲ್ಲಿ ಸೇರಿಸಿಕೊಳ್ಳ ಬಹುದೆಂಬ ನಿರೀಕ್ಷೆ, ಆಸೆ ಈ ಅಮ್ಮನಿಗೆ.................................